೧.ಭಾಷಾವಾರು ರಾಜ್ಯಗಳು ಅಸ್ತಿತ್ವಕ್ಕೆ ಬಂದರೆ ಅಲ್ಲಿ ಪ್ರಬಲ ಜಾತಿಯವರ ಹಿಡಿತ ಬರುತ್ತೆ, ಸಣ್ಣ ಜಾತಿಗಳು ಆಯ್ಕೆಯಾಗೋದು, ತಮ್ಮ ಏಳಿಗೆಗೆ ಒತ್ತಡ ಹೇರುವುದು ಸಾಧ್ಯವೇ ಅನ್ನುವ ಪ್ರಶ್ನೆ ಅಂಬೇಡ್ಕರ್ ಅವರಿಗಿತ್ತು ಎಂದು ಇವತ್ತೊಂದು ಬರಹದಲ್ಲಿ ಸೂಲಿಬೆಲೆಯವರು ಭಾಷಾವಾರು ರಾಜ್ಯಗಳನ್ನು ಮತ್ತೊಮ್ಮೆ subtle ಆಗಿ ವಿರೋಧಿಸಿ ಬರೆದಿದ್ದಾರೆ.
೨.ಪ್ರಬಲ ಜಾತಿಯವರ ಹಿಡಿತದ ಸಮಸ್ಯೆಗೆ ಪರಿಹಾರವನ್ನು ಮೀಸಲಾತಿಯ ಮೂಲಕ ರಾಜಕೀಯ ಪ್ರತಿನಿಧಿತ್ವ ಕಲ್ಪಿಸುವ ನಡೆ ಬಹುಮಟ್ಟಿಗೆ ಆಗಲೇ ಕಲ್ಪಿಸಿದೆ. ಇಷ್ಟಾಗಿಯೂ ಒಂದಿಷ್ಟು ಮಟ್ಟಿಗೆ ಈ ಸಮಸ್ಯೆ ಇದೆಯಾದರೂ ಅದು ಭಾಷೆಗಳ ಆಧಾರದ ಮೇಲೆ ರಾಜ್ಯ ಕಟ್ಟದೇ ಹೇಗೆಂದರೆ ಹಾಗೆ ಕಟ್ಟಿದ್ದರೆ ಆಗುತ್ತಿದ್ದ ಸಮಸ್ಯೆಗಳ ಹೋಲಿಕೆಯಲ್ಲಿ ಸಣ್ಣ ಸಮಸ್ಯೆ.
೩.ಸೂಲಿಬೆಲೆಯವರು ಈ ಹಿಂದೆ ಕರ್ನಾಟಕದ ನಕಾಶೆಯನ್ನು 2 ತುಂಡು ಮಾಡಿ ರಾಜ್ಯದ ವಿಭಜನೆ ಸಮರ್ಥಿಸುವ ಕಾರ್ಯಕ್ರಮವೊಂದನ್ನು ಮಾಡಿದ್ದರು. ಉತ್ತರ, ದಕ್ಷಿಣ ಅಂತ ಒಡೆದರೆ ಉ.ಕ ಲಿಂಗಾಯತರಿಗೂ, ದ.ಕ ಒಕ್ಕಲಿಗರಿಗೆ ಬರೆದು ಕೊಟ್ಟಂತಾಗುತ್ತದೆ. ಅಂಬೇಡ್ಕರ್ ಅವರು ಹೇಳಿದ್ದ ಪ್ರಬಲ ಜಾತಿಯ ಹಿಡಿತದ ಸಮಸ್ಯೆ ಇನ್ನೂ ಆಳವಾಗಿ ಆಗುತ್ತಿತ್ತು.
೪.ಭಾಷಿಕ ರಾಜ್ಯಗಳಿಂದ ಭಾರತದ ಪ್ರಗತಿಯೇ ಆಗಿದೆ. ಭಾಷಿಕ ರಾಜ್ಯ ಇದ್ದ ಕಾರಣಕ್ಕಾಗಿಯೇ ಜನರಿಗೆ ತಮ್ಮದೇ ನುಡಿಯಲ್ಲಿ ತಕ್ಕ ಮಟ್ಟಿಗೆ ಕಲಿಕೆ, ಆಡಳಿತ, ನ್ಯಾಯದಾನ, ದುಡಿಮೆಯ ಅವಕಾಶಗಳು ಒದಗಿವೆ. ಹಿಂದೆ ಮರಾಠರ ಹಿಡಿತದಲ್ಲಿ ಉತ್ತರ ಕರ್ನಾಟಕ ಹೇಗೆಲ್ಲ ನಲುಗಿತ್ತು ಅನ್ನುವುದನ್ನು ತಿಳಿದರೆ ಯಾಕೆ ಅಲ್ಲಿ ಜನರು ಏಕೀಕರಣದ ಪರ ಇದ್ದರು ಅಂತ ತಿಳಿಬಹುದು
೫.ಸ್ವಾತಂತ್ರ್ಯ ನಂತರದ ಭಾರತದ ವ್ಯವಸ್ಥೆ ಹಂತ ಹಂತವಾಗಿ ಕೇಂದ್ರಿಕೃತ ವ್ಯವಸ್ಥೆಯತ್ತ ಹೋದ ಕಾರಣಕ್ಕೆ ಇಂದು ಸಮಸ್ಯೆಗಳಾಗುತ್ತಿವೆ. ಕರ್ನಾಟಕ ದೇಶದ ಟಾಪ್ 5 ತೆರಿಗೆ ಕೊಡುವ ರಾಜ್ಯವಾದರೂ ರೈಲು, ರಸ್ತೆ, ನೆರೆಬರಪರಿಹಾರ, ತೆರಿಗೆ ಹಂಚಿಕೆ, ಉದ್ಯೋಗ, ಹೀಗೆ ಎಲ್ಲದರಲ್ಲೂ ವಂಚನೆಗೊಳಗಾಗಿದೆ. ಇದಕ್ಕೆ ಪರಿಹಾರ ಒಕ್ಕೂಟ ವ್ಯವಸ್ಥೆ ಗಟ್ಟಿಗೊಳಿಸುವುದು.
೬.ದೆಹಲಿಯಲ್ಲಿ ಜನಸಂಖ್ಯೆ ಆಧಾರಿತ ಪ್ರತಿನಿಧಿತ್ವ ಇರುವಾಗ ಸಣ್ಣ ರಾಜ್ಯಗಳ ದನಿಗೆ ಯಾವುದೇ ಬಲವಿಲ್ಲ. ಹೀಗಿರುವಾಗ ಒಂದು ಮಟ್ಟಿಗಿನ ಬ್ಯಾಲೆನ್ಸ್ ಆಫ್ ಪವರ್ ಕೊಡುವ ಭಾಷಾವಾರು ರಾಜ್ಯಗಳನ್ನು ಒಡೆಯುವುದು, ಭಾಷಾವಾರು ರಾಜ್ಯಗಳ ಕಲ್ಪನೆಯನ್ನು ವಿರೋಧಿಸುವುದು, ಹಿಂದಿಯೇತರ ರಾಜ್ಯಗಳ ದನಿಯನ್ನು ಇನ್ನಷ್ಟು ಕುಗ್ಗಿಸುತ್ತೆ.
೭.ಭಾಷೆ ಕೊಡುವ ಸಹೋದರತ್ವ ಹೇಗೆ ಭಾಷಿಕರೆಲ್ಲರ ಏಳಿಗೆಗೆ ಬೇಕಾಗುವ ರೀತಿಯಲ್ಲಿ ಸರ್ಕಾರದ ಸಂಪನ್ಮೂಲದ ಹಂಚಿಕೆಗೆ ಕಾರಣವಾಗುತ್ತೆ ಅನ್ನುವ ಬಗ್ಗೆ Subnationalism and Social Development ಅನ್ನುವ ಪುಸ್ತಕ ಒಮ್ಮೆ ಸೂಲಿಬೆಲೆಯವರು ಓದಬೇಕು. ಭಾಷಾವಾರು ರಾಜ್ಯಗಳಾದ ಕಾರಣಕ್ಕೆ ದಕ್ಷಿಣದ ಎಲ್ಲ ರಾಜ್ಯಗಳು ಹಿಂದಿಬೆಲ್ಟ್ ರಾಜ್ಯಗಳಿಗಿಂತ ಮುಂದಿವೆ.
೮.2025ಕ್ಕೆ ಲೋಕಸಭೆಯ ಸದಸ್ಯರ ಸಂಖ್ಯೆ ಹೊಸ ಜನಗಣತಿಯ ಪ್ರಕಾರ ಆದಲ್ಲಿ ಕರ್ನಾಟಕಕ್ಕೆ ಈಗಿರುವ ಲೋಕಸಭೆ ಸದಸ್ಯರ ಸಂಖ್ಯೆ ಐದರಷ್ಟು ಕುಸಿಯಲಿದೆ. ಇಂತಹ ಹೊತ್ತಲ್ಲಿ ಕರ್ನಾಟಕದ ದನಿ ಉಳಿಸಿಕೊಳ್ಳಬೇಕು ಅನ್ನುವ ಆಸೆಯಿರುವವರು ಯಾವ ಕಾರಣಕ್ಕೂ ರಾಜ್ಯ ವಿಭಜನೆ ಸಮರ್ಥಿಸಬಾರದು. #Karnatakavonde